ಕಾಲ್ಮೆಟ್, ಲಿಯಾನ್ ಚಾರಲ್ಸ್ ಆಲ್ಬರ್ಟ್

1833-1933. ಫ್ರಾನ್ಸಿನ ಏಕಾಣುಜೀವಿಶಾಸ್ತ್ರಜ್ಞ. ಕ್ಷಯ ಹತ್ತದಿರುವಂತೆ ಮಕ್ಕಳಿಗೆ ಹಾಕುವ ಬಿ.ಸಿ.ಜಿ. ಲಸಿಕೆಯನ್ನು ತಯಾರಿಸಲು ಕಾರಣರಾದ ಇಬ್ಬರಲ್ಲಿ ಒಬ್ಬ. ಪ್ಯಾರಿಸ್ಸಿನಲ್ಲಿ ವೈದ್ಯಪದವೀಧರನಾದ (1886). ಹಾವು ಕಚ್ಚಿದವರ ಚಿಕಿತ್ಸೆಗಾಗಿ ಚುಚ್ಚುವ ಲಸಿಕೆಯನ್ನು ಈತ ತಯಾರಿಸಿದ್ದು 1897ರಲ್ಲಿ. ಈಗಲೂ ಅದು ಭಾರತದಲ್ಲಿ ಬಳಕೆಯಲ್ಲಿದೆ. ಕ್ಷಯಾಣುಸಾರದ (ಟ್ಯುಬಕ್ರ್ಯುಲಿನ್) ಪ್ರತಿಕ್ರಿಯೆಯನ್ನು ಕಣ್ಣಲ್ಲಿ ಹೇಗೆ ಗುರುತಿಸಬೇಕೆಂದು ವಿವರಿಸಿದ (1907). ಪ್ರಪಂಚದಲ್ಲಿ ಎಲ್ಲೆಲ್ಲೂ, ಅದರಲ್ಲೂ ಮುಂದುವರಿಯುತ್ತಿರುವ ನಾಡುಗಳಲ್ಲಿ, ಕ್ಷಯರೋಗವನ್ನು ತಡೆಗಟ್ಟಲು ಹಾಕುವ ಬಿ.ಸಿ.ಜಿ. ಲಸಿಕೆಯನ್ನು ಕೆಮಿಲ್ಲೆ ಗ್ವೆರಿನ್ನನೊಂದಿಗೆ ಸೇರಿ ಕಂಡುಹಿಡಿದ (1906). ಪ್ರಚಂಡ ವಿಷಕರ, ದನದ ಕ್ಷಯ ದಂಡಾಣುಜೀವಿಗಳನ್ನು (ಬೆಸಿಲ್ಲೈ) ಪಿತ್ತರಸ,ಆಲೂಗೆಡ್ಡೆ, ಗ್ಲಿಸರೀನಿನಲ್ಲಿ ಹಾಕಿ ತಳಿಯೆಬ್ಬಿಸಿದರೆ ವಿಷ ಕಳೆದು ಹಾನಿಮಾಡದಂತಾಗುತ್ತವೆಂದು ಕಂಡುಕೊಂಡ. ಇಷ್ಟಾದರೂ ಹೀಗೆ ವಿಷ ಕಳೆದುಕೊಂಡು ಸಾಧುವಾದ ರೋಗಾಣುಗಳಿಗೂ ಜನರ ಅಲ್ಲದೆ ದನಗಳ ಕ್ಷಯದ ಸೋಂಕು ಅಂಟುವುದನ್ನು ತಡೆಯುವ ಬಲ ಉಳಿದಿರುವುದನ್ನೂ ಗುರುತಿಸಿದ. ಈ ತಳಿಯ ಕ್ಷಯ ರೋಗಾಣುವಿಗೆ ಬೆಸಿಲಸ್ ಕಾಲ್ಮೆಟ್-ಗ್ವೆರಿನ್ (ಕಾಲ್ಮೆಟ್-ಗ್ವೆರಿನ್‍ರ ದಂಡಾಣುಜೀವಿ) ಎಂದು ಹೆಸರಾಯಿತು. ಇದೇ ಮೊಟಕಾಗಿ ಈಗ ಬಿ.ಸಿ.ಜಿ. ಆಗಿದೆ. ಹೀಗೆ ಜೀವವಿರುವ ಈ ಲಸಿಕೆ ಮೊಟ್ಟಮೊದಲು 1922ರಲ್ಲಿ ಮಕ್ಕಳ ಮೇಲೆ ಪ್ರಯೋಗವಾಯಿತು. ಈಗಿದು ಪ್ರಪಂಚದಲ್ಲಿ ಎಲ್ಲೆಲ್ಲೂ ಬಳಕೆಗೆ ಬಂದು ಎಲ್ಲ ತೆರನ ಕ್ಷಯರೋಗಗಳನ್ನು ಅಡಗಿಸುವುದರಲ್ಲಿ ಉತ್ತಮವಾದುದೆಂದು ಹೆಸರಾಗಿದೆ. ಚರ್ಮಕ್ಕೆ ಚುಚ್ಚುವ ಈ ಲಸಿಕೆಯನ್ನು ಹಾಕಿದ 4-6 ವಾರಗಳಲ್ಲಿ ವ್ಯಕ್ತಿಗೆ ಕ್ಷಯರೋಗ ತಡೆವ ಬಲ ಬರುವುದು. ಪ್ಯಾರಿಸ್ಸಿನ ಪ್ಯಾಶ್ಚರ್ ಸಂಸ್ಥೆಯ ನಿರ್ದೇಶಕನಾಗಿ ತಾನು ಕಂಡುಹಿಡಿದ ಈ ಮಹತ್ತರ ಶೋಧನೆಯನ್ನು ಕಾಲ್ಮೆಟ್ ದೃಢೀಕರಿಸಲು ಹಲವಾರು ಪ್ರಕಟನೆ, ಪ್ರಬಂಧಗಳನ್ನು ಹೊರತಂದರೂ ಈ ಲಸಿಕೆಯ ಗುಣವನ್ನು ಪ್ರಪಂಚ ನಿಜವಾಗಿ ಪುರಸ್ಕರಿಸಿದ್ದು ಕಾಲ್ಮೆಟ್ ಸತ್ತಮೇಲೆ ಮಾತ್ರ.              

 (ಡಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ